ದುಗ್ಗಳೆ 
	ಶಿವಶರಣೆ. ದೇವರದಾಸಿಮಯ್ಯನ ಪತ್ನಿ. ಶಿವಪುರದ ಮಲ್ಲಯ್ಯ, ಮಹದೇವಿ ಎಂಬ ಶರಣ ಶರಣೆಯರ ಪುತ್ರಿ. ಇವಳಿಂದಲೇ ನನ್ನ ಬದುಕು ಬಂಗಾರವಾದದ್ದು -  ಎಂಬ ಪತಿಯ ಪ್ರಶಂಸೆಗೆ ಪಾತ್ರಳಾದ ಸಾಧ್ವಿ. ಸಮಪ್ರಮಾಣದಲ್ಲಿ ಬೆರೆಸಿದ ಮರಳು ಮತ್ತು ಅಕ್ಕಿ ಹಾಗೂ ಒಂದು ಹೊರೆ ಕಬ್ಬು ಇವನ್ನು ಕೊಟ್ಟು ಉತ್ತಮ ಪರಮಾನ್ನವನ್ನು ಮಾಡಿ ಬಡಿಸುವವಳನ್ನು ಕೈಹಿಡಿಯುವುದಾಗಿ ತಿಳಿಸಿದಾಗ, ದುಗ್ಗಳೆ ಈ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ದಾಸಿಮಯ್ಯನ ಮೆಚ್ಚಿನ ಮಡದಿಯಾದಳಂತೆ.
ನೆಯ್ಗೆ ಇವರ ಕಾಯಕ. ದುಗ್ಗಳೆ ನಿಷ್ಠೆಯಿಂದ ನೂತನೂಲಿನಿಂದ ದಾಸಿಮಯ್ಯ ಒಂದು ಅಮೂಲ್ಯ ವಸ್ತ್ರ ನೆಯ್ದ. ಜಂಗಮ ವೇಷಧಾರಿಯಾಗಿ ಬಂದ ಶಿವ ಅದನ್ನು ಅಪೇಕ್ಷಿಸಿ, ದಾಸಿಮಯ್ಯನಿಂದ ಪಡೆದು, ಚೂರು ಚೂರಾಗಿ ಹರಿದು ತನ್ನ ಕೈಕಾಲುಗಳಿಗೆ ಸುತ್ತಿಕೊಂಡ. ಅನಂತರ ದುಗ್ಗಳೆಯ ಬಳಿಗೆ ಹೋಗಿ ದಾಸಿಮಯ್ಯ ದಿವ್ಯವಸ್ತ್ರವನ್ನು ಸಾಮಾನ್ಯ ಜಂಗಮನಾದ ನನಗೆ ಒಂದು ಮಾನ ಬತ್ತಕ್ಕೆ ಕೊಟ್ಟುಬಿಟ್ಟ ಎಂದು ದೂರಿದ. ಆಗ ದುಗ್ಗಳೆ ತುಂಬಾ ಸಂತೋಷ. ಲಿಂಗ ಸ್ವರೂಪಿಗಳಾದ ಜಂಗಮರನ್ನು ತೃಪ್ತಿಪಡಿಸುವುದಕ್ಕಿಂತ ಬೇರಾವ ಪುಣ್ಯಕಾರ್ಯವಿದೆ ನಿಜಕ್ಕೂ ನಾವು ಪುಣ್ಯವಂತರು ಎಂದಳು. 

ಒಮ್ಮೆ ಇಬ್ಬರು ಜಂಗಮರು ದಾಸಿಮಯ್ಯನಲ್ಲಿಗೆ ಬಂದು ಗೃಹಸ್ಥ ಧರ್ಮ ಯುಕ್ತವೋ ವಿರಕ್ತಾಶ್ರಮ ವಿಹಿತವೋ ಎಂದು ಪ್ರಶ್ನಿಸಿದಾಗ, ಅವರಿಗೆ ಹಲವು ದೃಷ್ಟಾಂತ ಕಥೆಗಳನ್ನು ಹೇಳಿದ ದಾಸಿಮಯ್ಯ ದುಗ್ಗಳೆಯನ್ನು ಕೂಗಿದನಂತೆ. ಒಳಗೆ ಧಾನ್ಯವನ್ನು ಕುಟ್ಟುತ್ತಿದ್ದ ದುಗ್ಗಳೆ ಮೇಲಕ್ಕೆತ್ತಿದ್ದ ಒನಕೆಯನ್ನು ಅಲ್ಲಿಯೇ ಬಿಟ್ಟು, ಸ್ವಲ್ಪವೂ ತಡಮಾಡದೆ ಬಂದಳಂತೆ. ನಡುಹಗಲಿನಲ್ಲಿ ದೀಪವನ್ನು ತಾ ಎಂದಾಗ ಕೂಡಲೇ ತಂದಳಂತೆ. ಈ ರೀತಿ ಪತಿಯ ಆಜ್ಞೆಯನ್ನು ಮರುನುಡಿಯದೆ ನೆರವೇರಿಸಿದ ಪತ್ನಿಯನ್ನು ತೋರಿ ಇಂಥ ಸತಿಯಿದ್ದರೆ, ಸಂಸಾರ ಸುಖಮಯವಾಗುತ್ತದೆ. ಇಲ್ಲವಾದರೆ ಅದು ದುಃಖದ ಆಗರವಾಗುತ್ತದೆ ಎಂದನತೆ. ಅದರಿಂದಲೇ ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂದು ದಾಸಿಮಯ್ಯ ನುಡಿದಿರುವುದು.

ಈಕೆ ವಚನಕಾರ್ತಿಯಾಗಿರಬೇಕು ಎಂದು ಊಹೆ. ಆದರೆ ಈಕೆಯ ವಚನಗಳಾವುವೂ ಸಿಕ್ಕಿಲ್ಲ. ದುಗ್ಗಳೆಯ ಬಗೆಗೆ ಪುರಾತನ ದೇವಿಯರ ತ್ರಿವಿಧಿ ಹೀಗೆ ಹೇಳುತ್ತದೆ:

ಮತಿಯಲ್ಲಿ ಗುಣದಲ್ಲಿ | ಪತಿಭಕ್ತಿಯಲ್ಲುಮಾ
ಪತಿಪೂಜೆಯಲ್ಲಿ ಅತಿಜಾಣೆಯೆನಿಸಿದ
          ಸತಿದುಗ್ಗಳವ್ವೆ ಶರಣಾಗು || 	

				
(ಎಸ್.ಎಸ್.ಎಂಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ